ಅಭಿನಂದ
	
ಕಾದಂಬರೀ ಕಥಾಸಾರ ಕಾವ್ಯವನ್ನು ಬರೆದ ಕವಿ (850-900). ಕ್ರಿ.ಶ.750ರ ಸುಮಾರಿನಲ್ಲಿ ಕಾಶ್ಮೀರ ದೇಶದಲ್ಲಿ ರಾಜನಾಗಿದ್ದ ಲಲಿತಾದಿತ್ಯನ ಮಂತ್ರಿಯಾಗಿದ್ದ ಶಕ್ತಿಸ್ವಾಮಿಯ ವಂಶದಲ್ಲಿ ಐದನೆಯ ಪೀಳಿಗೆಯವ. ಈ ಲಲಿತಾದಿತ್ಯನಿಗೆ ಮುಕ್ತಾಪೀಡನೆಂಬ ಇನ್ನೊಂದು ಹೆಸರೂ ಇತ್ತು ಎಂದು ಕಲ್ಹಣನ ರಾಜತರಂಗಿಣಿಯಲ್ಲಿ ಉಲ್ಲೇಖವಿದೆ. ಆದ್ದರಿಂದ ಬಾಣಭಟ್ಟನ ಅನಂತರ ಸುಮಾರು 150 ವರ್ಷಗಳಲ್ಲಿ ಅಭಿನಂದ ಇದ್ದಿರಬಹುದು. ಕ್ರಿ.ಶ. 10ನೆಯ ಶತಕದ ಅಂತ್ಯದಲ್ಲಿ ಅಭಿನವಗುಪ್ತ ತನ್ನ ಧ್ವನ್ಯಾಲೋಕಲೋಚನದಲ್ಲಿ ಕಾದಂಬರೀಕಥಾಸಾರವನ್ನು ನೆನಪಿಗೆ ತರುತ್ತಾನೆ (ಉದ್ಯೋತ 3). ಕ್ರಿ.ಶ. 11ನೆಯ ಶತಕದ ಕ್ಷೇಮೇಂದ್ರ ತನ್ನ ಸುವೃತ್ತಿತಿಲಕದ ಮೂರನೆ ವಿನ್ಯಾಸದಲ್ಲೂ ಈ ಕಾವ್ಯದ ವಾಕ್ಯಗಳನ್ನು ಉಪಯೋಗಿಸಿರುತ್ತಾನೆ. ಅಭಿನಂದ ಅನುಷ್ಟುಭ್ ವೃತ್ತಪ್ರಿಯನೆಂದು ಕ್ಷೇಮೇಂದ್ರ ಹೊಗಳಿದ್ದಾನೆ. ಈ ಒಂದು ಗ್ರಂಥವನ್ನು ಬಿಟ್ಟು ಈತ ಬೇರೆ ರಚಿಸಿರಲಾರ. ರಚಿಸಿದ್ದರೂ ಅದು ಈಗ ಉಪಲಬ್ಧವಿಲ್ಲ. ರಾಮಚರಿತವನ್ನು ಬರೆದ ಅಭಿನಂದಶತಾನಂದನ ಮಗ ಇವನಲ್ಲ. ಈ ಗ್ರಂಥ ಕಾಶಿಯ ಪಂಡಿತ್ ಎಂಬ ಮಾಸಿಕದಲ್ಲಿ 1867ರಲ್ಲಿ ಪ್ರಚುರವಾಯಿತು. ಆದರೆ ಕಾವ್ಯಮಾಲಾ ಪಂಕ್ತಿಯಲ್ಲಿ ಅಚ್ಚಾಗಿರುವ ಗ್ರಂಥ ಪಂಡಿತನಲ್ಲಿ ಪ್ರಚಾರವಾಗಿರುವುದಕ್ಕಿಂತ ಉತ್ತಮವಾಗಿದೆ. ತನ್ನ ವಂಶದವರು ಭಾರದ್ವಾಜ ಕುಲದವರು, ಗೌಡದೇಶದವರು ಎಂದು ಈತನೇ ಹೇಳಿಕೊಂಡಿದ್ದಾನೆ. ಈತನ ತಂದೆ ತಾತಂದಿರೆಲ್ಲ ಉತ್ತಮ ಕವಿಗಳೆಂದು ತಿಳಿಸಿದ್ದಾನೆ. ಇವನ ತಂದೆ ಜಯಂತ. ಆ ಜಯಂತನ ಪೂರ್ವಜರಾದ ಕಾಂತ, ಕಲ್ಯಾಣಸ್ವಾಮಿ, ಶಕ್ತಿಸ್ವಾಮಿ, ವಿಚಿತ್ರ, ಶಕ್ತಿ ಎಲ್ಲರೂ ವೇದವೇದಾಂಗ ವಿದುಷರು, ಸರ್ವಶಾಸ್ತ್ರಾರ್ಥವಾದಿಗಳು. ಈತ ಕಾದಂಬರೀಕಥಾಸಿಂಧೋಃಕಥಾ ಮಾತ್ರಂ ಸಮುದ್ಧøತಂ ಎಂದು ಉಪಕ್ರಮಿಸಿ ಸೂಕ್ತ ರೀತಿಯಲ್ಲಿ ಕಾವ್ಯವನ್ನು ರಚಿಸಿದ್ದಾನೆ.
	
ಇದು ಬಾಣನ ಗದ್ಯ-ಕಾದಂಬರಿಯ ಸಾರಸಂಗ್ರಹ ಪದ್ಯರೂಪದಲ್ಲಿದೆ. ಬಾಣನ ಗದ್ಯಬಂಧ ಕಷ್ಟವೆನ್ನುವವರಿಗೆ ಸುಲಭಪದ್ಯಶೈಲಿ ಆಪ್ಯಾಯಮಾನವಾಗುವುದರಲ್ಲಿ ಸಂಶಯವಿಲ್ಲ. ಬಾಣನ ಇಡೀ ಕಾದಂಬರೀ ಕಥೆಯನ್ನು ಎಂಟು ಸ್ವರ್ಗಗಳಲ್ಲಿ ಹೆಣೆದಿದ್ದಾನೆ. ಒಟ್ಟು 874 ಶ್ಲೋಕಗಳಿವೆ. ಒಂದೆರಡು ಕಡೆ ಬರುವ ವೃತ್ತಗಳನ್ನುಳಿದರೆ ಇಡೀ ಗ್ರಂಥ ಅನುಷ್ಟುಪ್ ಛಂದಸ್ಸಿನಲ್ಲಿದೆ. ಮೂಲಕಥೆಗೆ ಲೋಪ ಬಾರದಂತೆ ನೋಡಿಕೊಂಡು ಅಪ್ರಕೃತ ವರ್ಣನೆಯನ್ನು ಬಿಟ್ಟು ಕಾವ್ಯ ಮಾಧುರ್ಯಕ್ಕೆ ಚ್ಯುತಿ ಬಾರದಂತೆ ಕವಿ ವಸ್ತುಸಂಗ್ರಹ ಮಾಡಿದ್ದಾನೆ. ವರ್ಣನೆಗಳ ಗಾಂಭೀರ್ಯದಲ್ಲಿ ಕಥೆಯೇ ಮರೆತುಹೋಗುವಂಥ ಬಾಣನ ಕಾದಂಬರಿಯನ್ನು ಓದುವುದು ಒಳಿತು. ಇಲ್ಲಿ ಬಾಣನ ಪೂರ್ವಾರ್ಧ ಕಥೆಯೊಂದಿಗೆ ಭೂಷಣಭಟ್ಟನ ಉತ್ತರಾರ್ಧಕಥೆಯೂ ಇದೆ. ಸಮಗ್ರಕಾದಂಬರಿಕಥೆಯ ಸಾರವನ್ನು ಸಾರವತ್ತಾಗಿ ಸಂಗ್ರಹಿಸಿ ಕಾವ್ಯರೂಪದಲ್ಲಿ ಬರೆದ ಕೀರ್ತಿ ಕವಿ ಅಭಿನಂದನಿಗೆ ಸಲ್ಲುವುದು ಯಥೋಚಿತವಾಗಿದೆ. ಇವನ ಶೈಲಿ ಸುಲಭ ಮತ್ತು ಸುಭಗ. ಅಭಿನಂದ ಕಾವ್ಯದ ಆದಿಯಲ್ಲಿ ತನ್ನ ಗುರು ಪರಂಪರೆಯನ್ನು ಸ್ಮರಿಸುತ್ತಾ ಅವರ ಶೈಲಿ ಸರಸಾ ಸದಲಂಕಾರಾಃಪ್ರಸಾದಮಧುರಾಗಿರಃ ಎಂಬ ಮಾತನ್ನು ಹೇಳುತ್ತಾನೆ. ಇದು ಆತನ ಕಾವ್ಯಕ್ಕೂ ಸಲ್ಲುವುದು.
	
ಕಾವ್ಯದಲ್ಲಿನ ಐತಿಹಾಸಿಕ ಧ್ವನಿ ಮೂಲದ ಗಾಂಭೀರ್ಯಕ್ಕೆ ಚ್ಯುತಿ ತಂದಿಲ್ಲ. ಅತಿ ವಿಸ್ತøತ ಕಥೆಯನ್ನು ಸಂಗ್ರಹಿಸುವಾಗ ಮೂಲದ ಸ್ವಾರಸ್ಯಕ್ಕೆ ಕುಂದು ಬಂದಿಲ್ಲ. ಕವಿತಾಶಕ್ತಿ, ಪಾಂಡಿತ್ಯ ಮತ್ತು ಪ್ರತಿಭೆಗಳ ವಿಚಿತ್ರ ಸಂಗಮವನ್ನಿಲ್ಲಿ ಕಾಣಬಹುದು.

(ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ